ದೆಹಲಿ ವರ್ಗ -
ಕಡಪ ಶಿಲಾಸಮುದಾಯಕ್ಕೆ ಸಂವಾದಿಯಾಗಿ ರಾಜಸ್ತಾನದಲ್ಲಿ ದೊರೆಯುವ ಶಿಲಾಸಮುದಾಯ.  ಧಾರವಾಡ ಯುಗದ ಅನಂತರ ಮಹಾಪ್ರಳಯವಾಗಿ ಅಲ್ಲಿಯ ಶಿಲಾಸಮುದಾಯಗಳು ಮಡಿಕೆಗಳಾಗಿ ಮಾರ್ಪಟ್ಟು ಬೆಟ್ಟಗಳಾದವು.  ಧಾರವಾಡ ಭೂಚಲನೆಯ ಬಳಿಕ ಬಹಳಷ್ಟು ಕಾಲದವರೆಗೆ ಶಿಲೆಗಳ ಶಿಥಿಲೀಕರಣ ನಡೆಯಿತು.  ಭೂ ಇತಿಹಾಸದ ಈ ಭಾಗಕ್ಕೆ ಈಪಾರ್ಕಿಯನ್ ಅನನುರೂಪತೆ ಎಂದು ಹೆಸರು.  ಇದಾದ ಬಳಿಕ ನಿಕ್ಷೇಪಕಾರ್ಯ ಪ್ರಾರಂಭವಾಯಿತು.  ಕಡಪ ಪ್ರದೇಶ, ಕರ್ನೂಲ್. ವಿಂಧ್ಯ ಪರ್ವತ ಪ್ರದೇಶಗಳ ಕೆಲಭಾಗಗಳು ಜಲನಿಧಿಗಳಾಗಿ ಅಲ್ಲಿ ಶಿಲಾನಿಕ್ಷೇಪವಾಗಿದೆ.  ಈ ಕಾಲಕ್ಕೆ ಪುರಾಣಯುಗವೆಂದು ಹೆಸರು.  ಭಾರತದಲ್ಲಿ ಈ ಯುಗವನ್ನು ಎರಡು ಭಾಗಗಳಾಗಿ ವಿಂಗಡಿಸಿರುವರು:  ಆದಿ ಪುರಾಣ ಯುಗ, ಅಂತ್ಯ ಪುರಾಣ ಯುಗ. ಆದಿಪುರಾಣ ಯುಗದಲ್ಲಿ ಕಡಪ ಪ್ರದೇಶದಲ್ಲಿ ಮಹತ್ತರ ಶಿಲಾ ನಿಕ್ಷೇಪಗೊಂಡಿರುವುದರಿಂದ ಈ ಯುಗವನ್ನು ಕಡಪ ಶಿಲಾಸಮುದಾಯವೆನ್ನುವರು.  ಈ ಶಿಲೆಗಳಿಗೆ ಸಮವಾಗಿ ರಾಜಸ್ತಾನದಲ್ಲಿ ದೊರೆಯುವ ಶಿಲಾಸಮುದಾಯವೇ ದೆಹಲಿ ವರ್ಗ.  ಈ ವರ್ಗದ ಶಿಲೆಗಳು ದೆಹಲಿಯಿಂದ ಈಡಾರ ಪ್ರದೇಶದವರೆಗೆ ಹಬ್ಬಿದ್ದು ಮುಖ್ಯವಾಗಿ ಅಜಮೀರ ಮತ್ತು ಪಶ್ಚಿಮ ಮೆವಾರ ಪ್ರದೇಶದಲ್ಲಿ ಇವುಗಳ ಸಮುದಾಯ ಚೆನ್ನಾಗಿ ಕಂಡುಬಂದಿದೆ.  ಇವು ಮೇಲ್ಭಾಗದಲ್ಲಿ ಅನನುರೂಪತೆಯಿಂದ ರಿಯಾಲೋ ಶ್ರೇಣಿ ಮತ್ತು ಅದರ ಮೇಲೆ ವಿಂಧ್ಯ ಶ್ರೇಣಿಯಿಂದ  ಕೂಡಿವೆ.  ದೆಹಲಿ ವರ್ಗದ ಶಿಲಾ ಸ್ತೋಮಗಳು ಭೂಚಲನೆಗೆ ಒಳಪಟ್ಟು, ಮಡಿಕೆಗಳಾಗಿ ಮಾರ್ಪಟ್ಟು ಅಗಾಧ ಪ್ರಮಾಣದ ಗ್ರ್ಯಾನೈಟುಗಳ ಅಂತಸ್ಸರಣಗಳನ್ನು ಪಡೆದಿವೆ.

ದೆಹಲಿ ವರ್ಗದ ಶಿಲಾಸಮುದಾಯವನ್ನು ಎರಡು ಭಾಗಗಳಾಗಿ  ವಿಂಗಡಿಸಲಾಗಿದೆ:  ಕೆಳ ಅಲ್ವಾರ ವರ್ಗ, ಮೇಲು ಅಜಬಗರ ವರ್ಗ. ಕೆಳ ಅಲ್ವಾರ ವರ್ಗದಲ್ಲಿ ಬೆಣಚು ಶಿಲೆ, ಗ್ರಿಟ್ ಮತ್ತು ಪೆಂಟೆಕಲ್ಲು ಶಿಲೆಗಳ ಸಮುದಾಯವೂ ಅಜಬಗರ ವರ್ಗದಲ್ಲಿ ಜೇಡುಪದರ ಶಿಲೆ ಮತ್ತು ಪದರ ಶಿಲೆಗಳ ಸಮುದಾಯವೂ ಇವೆ.  ಇಲ್ಲಿಯ ಶಿಲೆಗಳ ಸಮುದಾಯ ಕಡಿಮೆ ರೂಪಾಂತರಗೊಂಡಿದೆ.  ಮಧ್ಯ ಮತ್ತು ದಕ್ಷಿಣ ರಾಜಸ್ತಾನದಲ್ಲಿ ಎರಿನಪುರಾ ಗ್ರ್ಯಾನೈಟಿನಿಂದ ಮತ್ತು ಈಡಾರ ಗ್ರ್ಯಾನೈಟ್‍ನಿಂದ ಅಂತಸ್ಸರಣವಾಗಿವೆ.  ಅದರಂತೆ ಪಶ್ಚಿಮ ರಾಜಸ್ತಾನದಲ್ಲಿ ಮಾಲನಿ ಅಗ್ನಿಶಿಲೆಗಳಿಂದ ಅಂತಸ್ಸರಣವಾಗಿವೆ.  ಮಾಲನಿ ಅಗ್ನಿಶಿಲೆಗಳ ಜಾಲರ ಗ್ರ್ಯಾನೈಟ್, ಸಿವಾನಾ ಗ್ರ್ಯಾನೈಟ್, ಮಾಲನಿ ರಯಾಲೈಟ್ ಮತ್ತು ಫೆಲ್ಸೆಟ್ ಶಿಲೆಗಳಿಂದ ಕೂಡಿವೆ.  ದೆಹಲಿ ಶಿಲಾವರ್ಗದಲ್ಲಿ ಅನೇಕ ಉಪಯುಕ್ತ ಖನಿಜ ಸಮೂಹ ಉಂಟು.  ಸ್ಲೇಟುಗಳು, ಮರಳುಕಲ್ಲು ಇದರಲ್ಲಿ ಮುಖ್ಯವಾದವು.  ರಾಜಸ್ತಾನದ ಕಂದ ಎಂಬಲ್ಲಿ ಸ್ಲೇಟನ್ನು ತೆಗೆಯುವರು.  ಜಿಂದ ಪ್ರದೇಶದಲ್ಲಿ ಬಳುಕುವ ಮರಳು ಶಿಲೆ ದೊರೆಯುವುದು.  

ಉಪಯೋಗಗಳು :  ದೆಹಲಿ ಶಿಲಾವರ್ಗದಲ್ಲಿ ಅನೇಕ ಆರ್ಥಿಕ ಖನಿಜಗಳುಂಟು.  ಬೆಣಚುಕಲ್ಲು, ಪೆಂಟೆಕಲ್ಲು, ಪಾಟಿ ಕಲ್ಲು, (ಸ್ಲೇಟುಗಳು). ಮರಳುಕಲ್ಲು ಮೊದಲಾದ ಉಪಯೋಗ ಶಿಲೆಗಳು ಇವೆ. ಮರಳು ಶಿಲೆಯನ್ನು ಕಟ್ಟಡ ನಿರ್ಮಿಸುವಲ್ಲಿಯೂ ಸ್ಲೇಟುಗಳನ್ನು ಹಾಸುಕಲ್ಲು ಮತ್ತು ಮಾಳಿಗೆಗಳಲ್ಲಿಯೂ ಉಪಯೋಗಿಸುವರು.		(ಬಿ.ಎಸ್.ಎ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ